ಪೌರಾಡಳಿತ ನಿರ್ದೇಶನಾಲಯವನ್ನು ರಾಜ್ಯದ ಮಹಾನಗರಪಾಲಿಕೆ, ನಗರಸಭೆ, ಪುರಸಭೆ ಮತ್ತ ಪಟ್ಟಣ ಪಂಚಾಯಿತಿ (ಬಿ.ಬಿ.ಎಂ.ಪಿ ಯನ್ನು ಹೊರತುಪಡಿಸಿ ) ಗಳ ಮೇಲ್ವಿಚಾರಣೆಗಾಗಿ ಸ್ಥಾಪನೆ ಮಾಡಲಾಗಿರುತ್ತದೆ.

ಕರ್ನಾಟಕ ನಗರ ಸ್ಥಳೀಯ ಸಂಸ್ಥೆಗಳ (ಇವುಗಳನ್ನು ಸಾಮಾನ್ಯವಾಗಿ ಮುನಿಸಿಪಾಲಿಟಿಗಳೆಂದು ಕರೆಯಲಾಗುವುದು) ಇತಿಹಾಸವು ಒಂದು ಶತಮಾನಕ್ಕಿಂತ ಹಿಂದಿನಿಂದಲೂ ಇರುತ್ತದೆ. ಸ್ಥಳೀಯ ಸಂಸ್ಥೆಗಳನ್ನು ಮಹಾನಗರ ಪಾಲಿಕೆ, ನಗರಸಭೆ, ಪುರಸಭೆ ಮತ್ತು ಪಟ್ಟಣ ಪಂಚಾಯಿತಿಗಳಾಗಿ ವಿಂಗಡಿಸಲಾಗಿದೆ. ನಗರ ಸ್ಥಳೀಯ ಸಂಸ್ಥೆಗಳು ಕರ್ನಾಟಕ ಪೌರಸಭೆಗಳ ಅಧಿನಿಯಮ, 1964 (ನಗರಸಭೆ, ಪುರಸಭೆ, ಪಟ್ಟಣಪಂಚಾಯಿತಿ) ಮತ್ತು ಕರ್ನಾಟಕ ಮಹಾನಗರ ಪಾಲಿಕೆಗಳ ಅಧಿನಿಯಮ, 1976 (ಮಹಾನಗರ ಪಾಲಿಕೆ) ರ ಪ್ರಕಾರ ಆಡಳಿತ ನಿರ್ವಹಿಸುತ್ತಿವೆ.

ಕರ್ನಾಟಕ ಸರ್ಕಾರವು 74ನೇ ಸಂವಿಧಾನಾತ್ಮಕ ತಿದ್ದುಪಡಿಯ ಅಧಿನಿಯಮದ ಪ್ರಕಾರ ನಗರ ಸ್ಥಳೀಯ ಸಂಸ್ಥೆಗಳನ್ನು ರಚಿಸಿದೆ. ನಗರ/ಪಟ್ಟಣಗಳನ್ನು ಜನಸಂಖ್ಯೆಯ ಆಧಾರ ಮತ್ತು ಇತರೆ ಮಾನದಂಡದ ಮೇಲೆ ಪಟ್ಟಣ ಪಂಚಾಯಿತಿ (ಜನಸಂಖ್ಯೆ 10,000 ರಿಂದ 20,000), ಪುರಸಭೆ (ಜನಸಂಖ್ಯೆ 20,000 ರಿಂದ 50,000), ನಗರಸಭೆ (ಜನಸಂಖ್ಯೆ 50 ರಿಂದ 5,00,000) ಮತ್ತು ಮಹಾನಗರ ಪಾಲಿಕೆ (3 ಲಕ್ಷಕ್ಕಿಂತ ಹೆಚ್ಚಿನ ಜನಸಂಖ್ಯೆ) ಗಳೆಂದು ವಿಂಗಡಿಸಲಾಗಿದೆ. ಇದರ ಆಧಾರದ ಮೇಲೆ ಪ್ರಸ್ತುತ 10 ಮಹಾನಗರ ಪಾಲಿಕೆ, 59 ನಗರಸಭೆಗಳು, 116 ಪುರಸಭೆಗಳು ಮತ್ತು 97 ಪಟ್ಟಣ ಪಂಚಾಯಿತಿಗಳು ಇರುತ್ತವೆ ಹಾಗೂ ಮುನಿಸಿಪಲ್ ಸೇವೆ ಅವಶ್ಯಕತೆ ಇರುವ ಕೈಗಾರಿಕಾ ಪ್ರದೇಶಗಳಲ್ಲಿ ಸರ್ಕಾರವು 4 ಅಧಿಸೂಚಿತಾ ಪ್ರದೇಶಗಳನ್ನು ಸೃಷ್ಠಿಸಿದೆ.

ಮೇಲ್ಕಾಣಿಸಿದ ಜವಾಬ್ದಾರಿಗಳನ್ನು ನಿರ್ವಹಿಸಲು ನಗರ ಸ್ಥಳೀಯ ಸಂಸ್ಥೆಗಳಿಗೆ ಕೆಲವು ತೆರಿಗೆ ಮತ್ತು ಶುಲ್ಕಗಳನ್ನು ವಿಧಿಸಲು ಅಧಿಕಾರವಿರುತ್ತದೆ. ಇದರೊಂದಿಗೆ ರಾಜ್ಯ ಸರ್ಕಾರವು ತನ್ನ ಆದಾಯದ ಕೆಲವೊಂದು ಭಾಗವನ್ನು ವರ್ಗಾಯಿಸುತ್ತದೆ. ನಗರ ಸ್ಥಳೀಯ ಸಂಸ್ಥೆಗಳು ಪ್ರಮುಖ ಆದಾಯವನ್ನು (ಅ) ಕಟ್ಟಡ ಮತ್ತು ನಿವೇಶನದ ಮೇಲಿನ ತೆರಿಗೆ (ಆ) ನೀರಿನ ಬಳಕೆಯ ಶುಲ್ಕ (ಇ) ನಿಯಮಾನುಸಾರ ಕಟ್ಟಡ ನಿರ್ಮಾಣವನ್ನು ಮಾಡಲು ಮತ್ತು ಉದ್ದಿಮೆಗಳನ್ನು ನಡೆಸಲು ವಿಧಿಸುವ ಪರವಾನಿಗೆ ಶುಲ್ಕ ಈ) ಜಾಹೀರಾತು ಶುಲ್ಕ ಉ) ಆಸ್ತಿ ನಿರ್ಹವಣೆ ಸಂಬಂಧಿತ ಶುಲ್ಕಗಳಿಂದ ಸಂಗ್ರಹಿಸಲಾಗುತ್ತದೆ.. ಇವುಗಳ ಜೊತೆಗೆ ನಗರ ಸ್ಥಳೀಯ ಸಂಸ್ಥೆಗಳು ಲೆಕ್ಕ ಶೀರ್ಷಿಕೆಯ ಮೂಲ ಧನದಡಿ ಖರ್ಚನ್ನು ಸರಿದೊಗಿಸಲು ರಾಜ್ಯ ಮತ್ತು ಕೇಂದ್ರ ಸರ್ಕಾರದಿಂದ ಮತ್ತು ಹಣಕಾಸು ಸಂಸ್ಥೆಗಳಿಂದ ಸಾಲದ ನೆರವನ್ನು ಪಡೆಯಬಹುದಾಗಿರುತ್ತದೆ.

ಮೂಲ : ಪೌರಾಡಳಿತ ನಿರ್ದೇಶನಾಲಯ , ಕರ್ನಾಟಕ ಸರ್ಕಾರ.